ದೇಸಾಯಿ, ಭೂಲಾಭಾಯಿ
1877-1946. ಶ್ರೇಷ್ಠ ವಕೀಲ. ಸಂಸದೀಯ ವ್ಯವಹಾರಪಟು ಮತ್ತು ಸ್ವಾತಂತ್ರ್ಯ ಹೋರಾಟಗಾರ.  ಇವರು 1877 ರ ಅಕ್ಟೋಬರ್ 13 ರಂದು ಸೂರತ್ ಜಿಲ್ಲೆಯ ವಲಸಾಡ್‍ನಲ್ಲಿ ಜನಿಸಿದರು.  ತಂದೆ ಜೀವನ್ ಜೀ ಸರ್ಕಾರಿ ವಕೀಲರಾಗಿದ್ದರು.  ಬಾಲಕ ಭೂಲಾಭಾಯಿ ಪ್ರತಿದಿನ ಐದು ಮೈಲಿ ದೂರ ನಡೆದು ಹೋಗಿ ಪ್ರಾಥಮಿಕ ಶಾಲೆಯ ಶಿಕ್ಷಣವನ್ನು ಮುಗಿಸಿದರು.  1895 ರಲ್ಲಿ ಮೆಟ್ರಿಕ್ ಶಿಕ್ಷಣ ಮುಗಿಸಿ ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜು ಸೇರಿ ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಂಡರು.  ಬಿ.ಎ. ಪರೀಕ್ಷೆಯಲ್ಲಿ ಇಂಗ್ಲಿಷ್ ಸಾಹಿತ್ಯ ವಿಭಾಗದ ವಡ್ರ್ಸ್‍ವರ್ತ್ ಬಹುಮಾನ ಇವರಿಗೆ ದೊರಕಿತು.  ಇತಿಹಾಸ ವಿಭಾಗದಲ್ಲಿ ಇವರು ವಿದ್ಯಾರ್ಥಿ ವೇತನ ಪಡೆದರು.  ಬಿ. ಎ. ಆನರ್ಸ್ ಪರೀಕ್ಷೆಯಲ್ಲಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾದ ಮೇಲೆ ಅಹಮದಾಬಾದಿನ ಗುಜರಾತ್ ಕಾಲೇಜಿನ  ಇಂಗ್ಲಿಷ್ ಮತ್ತು ಇತಿಹಾಸ ಪ್ರಾಧ್ಯಾಪಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು.  ಆಗ ಇವರು ಎಲ್ ಎಲ್ ಬಿ ಮುಗಿಸಿ ಅನಂತರ ಮುಂಬಯಿ ಹೈಕೋರ್ಟ್‍ನ ವಕೀಲಿ ಪರೀಕ್ಷೆಗೆ ಕುಳಿತು ಅದರಲ್ಲೂ ತೇರ್ಗಡೆ ಹೊಂದಿದರು.  1905 ರ ಡಿಸೆಂಬರ್ 22 ರಂದು ಮುಂಬಯಿ ಶ್ರೇಷ್ಠ ನ್ಯಾಯಾಲಯದಲ್ಲಿ ವಕೀಲಿ ಆರಂಭಿಸಿದ ದೇಸಾಯಿಯವರು ಕೆಲವು ವರ್ಷಗಳಲ್ಲೇ ಆ ಪ್ರಾಂತ್ಯದ ಶ್ರೇಷ್ಠ ವಕೀಲರಲ್ಲಿ ಒಬ್ಬರೆಂಬ ಖ್ಯಾತಿ ಗಳಿಸಿದರು. 
ಅಂದಿನ ರಾಜಕಾರಣ ದೇಸಾಯಿಯವರನ್ನು ಸೆಳೆಯಿತು. ಮೊದಲು ಅವರು ಆನಿ ಬೆಸಂಟ್‍ರ ಹೋಮ್ ರೂಲ್ ಲೀಗಿಗೆ ಸೇರಿ ಉಪನ್ಯಾಸಗಳನ್ನು ನೀಡಿದರಲ್ಲದೆ ಲಿಬರಲ್ ಪಕ್ಷದ ಸದಸ್ಯರು ಆದರು.  1922 ರಲ್ಲಿ ಬರ್ಡೋಲಿಯಲ್ಲಿ ಗಾಂಧೀಜಿಯವರು ಆರಂಭಿಸಿದ ಕರನಿರಾಕರಣ ಚಳುವಳಿಯ ಸಂದರ್ಭದಲ್ಲಿ ರೈತರ ಪರವಾಗಿ ವಾದ ಮಾಡುವ ಅವಕಾಶ ಭೂಲಾಭಾಯಿಯವರಿಗೆ ದೊರಕಿತು. ಅವರು ಅತ್ಯಂತ ಸಮರ್ಥವಾಗಿ ರೈತರ ಪರವಾಗಿ ವಾದ ಮಾಡಿ ಅವರಿಗೆ ತೆರಿಗೆ ವಿನಾಯಿತಿ ದೊರೆಕಿಸಿಕೊಡುವುದರಲ್ಲಿ ಯಶಸ್ವಿಯಾದರು.

ದೇಸಾಯಿಯವರು ಲಿಬರಲ್ ಪಕ್ಷವನ್ನು ಬಿಟ್ಟು ಭಾರತ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸೇರಿದ್ದು 1930 ರಲ್ಲಿ. ವಿದೇಶಿ ವಸ್ತುಗಳ ಬಹಿಷ್ಕಾರ ಚಳುವಳಿಯಲ್ಲಿ ಅವರು ಭಾಗವಹಿಸಿದರು.  ಅದಕ್ಕಾಗಿಯೇ ಸ್ವದೇಶಿ ಸಭೆ ಎಂಬ ಸಂಸ್ಥೆ ಮುಂಬಯಿಯಲ್ಲಿ ಅವರಿಂದ ಸ್ಥಾಪಿತವಾಯಿತು.  ಈ ಸಂಸ್ಥೆಯ ಚಟುವಟಿಕೆಗಳ ಸಂಬಂಧವಾಗಿ 1932 ರ ಜುಲೈಯಲ್ಲಿ ದೇಸಾಯಿಯವರನ್ನು ಸರ್ಕಾರ ಬಂಧಿಸಿತು.  ಅವರಿಗೆ ಒಂದು ವರ್ಷ ಜೈಲು ವಿಧಿಸಲಾಯಿತು.

ದೇಸಾಯಿಯವರು  1934 ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದರು.  ಆಗ ಅವರು ಸ್ವರಾಜ್ಯ ಪಕ್ಷದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಅದೇ ವರ್ಷ ನವೆಂಬರ್‍ನಲ್ಲಿ ದೆಹಲಿಯ ಕೇಂದ್ರ ಶಾಸನ ಸಭೆಯ ಸದಸ್ಯರಾಗಿ ಗುಜರಾತಿನಿಂದ ಚುನಾಯಿತರಾದರು.  ಮುಂದೆ ಹತ್ತು ವರ್ಷಗಳ ಕಾಲ ಅವರು ಆ ಸಭೆಯ ಕಾಂಗ್ರೆಸ್  ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು.  ಈ ಮಧ್ಯೆ 1940 ರಲ್ಲಿ ಗಾಂಧೀಜಿಯವರು ನಿಯೋಜಿಸಿದ್ದ ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸಿ ಕೆಲವು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದರು.

1942 ರ ಆಗಸ್ಟಿನಲ್ಲಿ ಕಾಂಗ್ರೆಸ್ಸು ಆರಂಭಿಸಿದ ಚಲೇ ಜಾವ್ ಚಳುವಳಿಯಲ್ಲಿ ದೇಸಾಯಿಯವರು ಭಾಗವಹಿಸಲಿಲ್ಲ.  ಆ ವಿಚಾರವಾಗಿ ಅವರಿಗಿದ್ದ ಮೂಲ ಭೂತ ಭಿನ್ನಾಭಿಪ್ರಾಯಗಳೇ ಕಾರಣ.  1942- 45 ರಲ್ಲಿ ಕಾಂಗ್ರೆಸ್ಸಿನ ವರಿಷ್ಠ ನಾಯಕರು ಸೆರೆಯಲ್ಲಿದ್ದರು.  1944 ರಲ್ಲಿ ಗಾಂಧೀಜಿಯವರನ್ನು ಸೆರೆಮನೆಯಿಂದ ಬಿಡುಗಡೆ ಮಾಡಲಾಗಿತ್ತು.  ಭಾರತದ ಸ್ವಾತಂತ್ರ್ಯ ಸನ್ನಿಹಿತವಾಗುತ್ತಿದ್ದ ಕಾಲ ಅದು.  ಆಗ ಕೇಂದ್ರ ವಿಧಾನ ಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ದೇಸಾಯಿಯವರು ಆ ಸಭೆಯ ಮುಸ್ಲಿಂ ಲೀಗಿನ ನಾಯಕರಾಗಿದ್ದ ಲಿಯಾಖತ್ ಅಲಿಯವರೊಡನೆ ಸಂಧಾನಕ್ಕೆ ಇಳಿದು ಕೇಂದ್ರದಲ್ಲಿ ಕಾಂಗ್ರೆಸ್-ಲೀಗ್ ಪಕ್ಷಗಳ ತಾತ್ಕಾಲಿಕ ಸಂಮಿಶ್ರ ಮಂತ್ರಿಮಂಡಲ ರಚಿಸುವ ಬಗ್ಗೆ ಸೂತ್ರವನ್ನು ನಿರೂಪಿಸಿದರು.  ಕಾಂಗ್ರೆಸಿನ ವರಿಷ್ಠ ನಾಯಕರಾದ ನೆಹರೂ, ಪಟೇಲ್, ಆeóÁದ್ - ಇವರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಇತರ ಸದಸ್ಯರೂ ಸೆರೆಯಲ್ಲಿದ್ದಾಗ ಅವರ ಅನುಮತಿ ಇಲ್ಲದೆ ಮುಸ್ಲಿಂ ಲೀಗಿನ ನಾಯಕರೊಂದಿಗೆ ದೇಸಾಯಿಯವರು ಸಂಧಾನಕ್ಕೆ ಇಳಿದದ್ದು ಅನುಚಿತ ಕ್ರಮ ಎಂಬ ಟೀಕೆ ಬಂತು.  ನಾಯಕರ ಬಿಡುಗಡೆ ಆದ ಮೇಲೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿ ದೇಸಾಯಿಯವರ ಕ್ರಮವನ್ನು ತೀವ್ರವಾಗಿ ಪರಿಗಣಿಸಿತು.  ಅವರಿಗೆ ಮುಂದೆ ಯಾವ ಅಧಿಕಾರದ ಸ್ಥಾನಗಳನ್ನೂ ಕೊಡಲಿಲ್ಲ.  ಇದರಿಂದ ದೇಸಾಯಿಯವರ ರಾಜಕೀಯ ಜೀವನಕ್ಕೆ ಚ್ಯುತಿ ಬಂದ ಹಾಗಾಯಿತು.  

ಈ ಪ್ರಕರಣದಿಂದ ನೊಂದ ದೇಸಾಯಿಯವರ ವ್ಯಕ್ತಿತ್ವ ಮತ್ತೆ ಶೀಘ್ರದಲ್ಲೇ ಪ್ರಜ್ವಲಿಸುವ ಸಂದರ್ಭ ಬಂತು.  1945 ರ ಕೊನೆಯ ಹೊತ್ತಿಗೆ ದೆಹಲಿಯ ಕೆಂಪು ಕೋಟೆಯಲ್ಲಿ ಭಾರತ ರಾಷ್ಟ್ರೀಯ ಸೇನೆಯ ಯೋಧರ (ಇಂಡಿಯನ್ ನ್ಯಾಷನಲ್ ಆರ್ಮಿ - ಐ.ಎನ್.ಎ.) ವಿಚಾರಣೆ ನಡೆಯಿತು.  ಅವರು ಭಾರತ ಸರ್ಕಾರದ ರಕ್ಷಣಾ ಸೇವೆಯಲ್ಲಿದ್ದು ಎರಡನೆಯ ಮಹಾಯುದ್ಧದ ಸಮಯದಲ್ಲಿ ಅದನ್ನು ತ್ಯಜಿಸಿ ರಾಷ್ಟ್ರೀಯ ಸೇನೆ ಸೇರಿದ್ದವರು.  ಅವರ ಮೇಲೆ ವಿದ್ರೋಹದ ಆಪಾದನೆಯನ್ನು ಹೊರಿಸಲಾಗಿತ್ತು.  ಅವರ ವಿರುದ್ಧ ಮಾಡಲಾಗಿದ್ದ ಆರೋಪದ ವಿಚಾರಣೆ 1945 ರ ನವೆಂಬರ್ 5 ರಂದು ಆರಂಭವಾಗಿ 1945 ರ ಡಿಸೆಂಬರ್ 31 ಕ್ಕೆ ಮುಗಿಯಿತು.  ಈ ವಿಚಾರಣೆಯಲ್ಲಿ ದೇಸಾಯಿಯವರು ತಮ್ಮ ಅಪ್ರತಿಮ ವಾಗ್ವೈಖರಿಯನ್ನೂ ನ್ಯಾಯಪ್ರಜ್ಞೆಯನ್ನೂ ಪ್ರದರ್ಶಿಸಿದರು.  ಪಾರತಂತ್ರ್ಯದಲ್ಲಿರುವ ಜನ ಸ್ವಾತಂತ್ರ್ಯಕ್ಕಾಗಿ ಲಷ್ಕರಿ ಮಾರ್ಗ ಅನುಸರಿಸುವುದು ಮೂಲಭೂತ ಹಕ್ಕೆಂಬುದನ್ನು ಪ್ರಭಾವಯುತವಾಗಿ ವಾದಿಸಿದರು.  ತುಂಬ ಅನಾರೋಗ್ಯ ಸ್ಥಿತಿಯಲ್ಲಿದ್ದುದರಿಂದ ತಳ್ಳುವ ಗಾಡಿಯಲ್ಲಿ ಕುಳಿತು ನ್ಯಾಯಾಲಯಕ್ಕೆ ಬರುತ್ತಿದ್ದ ದೇಸಾಯಿಯವರು ದಿನಗಟ್ಟಲೆ ಯಾವ ಟಿಪ್ಪಣಿಗಳ ಸಹಾಯವಿಲ್ಲದೆ ಮನೋಜ್ಞವಾಗಿ ವಾದಿಸುತ್ತಿರುವುದನ್ನು ಕಂಡ ಇಂಗ್ಲಿಷ್ ನ್ಯಾಯತಜ್ಞರೊಬ್ಬರು ದೇಸಾಯಿಯವರ ವಾದ ಇಂಗ್ಲಿಷ್ ಕಾನೂನು ಇತಿಹಾಸದ ಶ್ರೇಷ್ಠತಮ ವಾಙ್ಮಯದ ಸಾಲಿಗೆ ಸೇರತಕ್ಕದ್ದು ಎಂದಿದ್ದಾರೆ.  ವಿಚಾರಣೆಯಲ್ಲಿ ಆಪಾದಿತ ಪರ ಉಜ್ವಲವಾಗಿ ವಾದಿಸಿ ಅವರು ಜಯಗಳಿಸಿದರು.  ಇದಾದ ಸ್ವಲ್ಪ ದಿನಗಳಲ್ಲಿಯೇ 1946 ರ ಮೇ 6 ರಂದು ದೇಸಾಯಿಯವರು ಮುಂಬಯಿಯಲ್ಲಿ ನಿಧನರಾದರು.
(ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ